Get Even More Visitors To Your Blog, Upgrade To A Business Listing >>

ಕಾಂತಾವರದಲ್ಲಿ ಮೊಯಿಲಿ ಅಭಿನಂದನೆ ಕಾರ್ಯಕ್ರಮ: ಮಹಾಕಾವ್ಯದ ಅನುಸಂಧಾನ

ಮೂಡುಬಿದಿರೆ: ಶೋಷಣೆಯ ಇಂದಿನ ಸಾಮಾಜಿಕ ಪರಿಸ್ಥಿತಿಯಲ್ಲಿ ಮಹಾಭಾರತದ ದ್ರೌಪದಿಯ ಪಾತ್ರದೊಂದಿಗೆ ಕರ್ಣನ ವ್ಯಕ್ತಿತ್ವವೂ ಗಮನಾರ್ಹವಾಗಿದೆ. ತಮ್ಮ ಸಿರಿಮುಡಿ ಪರಿಕ್ರಮಣ ಮಹಾಕಾವ್ಯದಲ್ಲಿ ದ್ರೌಪದಿಯ ಮೂಲಕ ಒಂದು ಮುಖದ ಚಿತ್ರಣವಾಗಿದೆ. ಆದರೆ ವಿದ್ವಾಂಸರುಗಳು ತಮ್ಮ ಸಾಹಿತ್ಯ ವಿಮರ್ಶೆಯ ಮೂಲಕ ಕಾವ್ಯಕ್ಕೆ ಹೊಸ ಅರ್ಥಗಳನ್ನು ನೀಡಲು ಶಕ್ತರು. ಈ ನಿಟ್ಟಿನಲ್ಲಿ ಇಂದು ತಮ್ಮ ಮಹಾಕಾವ್ಯದ ಕುರಿತು ನಡೆದಿರುವ ನಾಲ್ಕನೇ ಮಂಥನ ಕಾರ್ಯಕ್ರಮವಾಗಿದ್ದು ಕಾವ್ಯನ್ಯಾಯ ಪಡೆದ ತೃಪ್ತಿ ಇದೆ ಎಂದು ಮಹಾಕವಿ ಡಾ.ವೀರಪ್ಪ ಮೊಯಿಲಿ ಅವರು ಹೇಳಿದರು.

ಅವರು ಕಾಂತಾವರದ ಅಲ್ಲಮಪ್ರಭು ಪೀಠದ ಆವರಣದಲ್ಲಿನ ಚೌಟರ ಚೌಕಿಯಲ್ಲಿ    ತಮ್ಮ ’ಸಿರಿಮುಡಿ ಪರಿಕ್ರಮಣ’ ಮಹಾಕಾವ್ಯದ ಜೊತೆ ಅನುಸಂಧಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಮ್ಮಾನ ಸ್ವೀಕರಿಸಿ ಮಾತನಾಡಿದರು. ಅಲ್ಲಮ ಪ್ರಭು ಪೀಠದ ಮೂಲಕ ನಮ್ಮ ನಾಡಿನ ಸಾಂಸ್ಕೃತಿಕ ತಳಹದಿ ರೂಪಿಸುವ ಕೆಲಸ ಕಾಂತಾವರದಲ್ಲಿ ನಡೆದಿದೆ ಎಂದವರು ಶ್ಲಾಘಿಸಿದರು.

ಅಭಿನಂದನಾ ಸಮಾರಂಭದಲ್ಲಿ ಕಾಂತಾವರದ ಅಲ್ಲಮಪ್ರಭು ಪೀಠ, ಕನ್ನಡಸಂಘ, ಮತ್ತು ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್  ವತಿಯಿಂದ  ಡಾ.ವೀರಪ್ಪ ಮೊಯಿಲಿಯವರನ್ನು ಗೌರವಿಸಲಾಯಿತು.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಜಾತಿ ರಾಜಕಾರಣದ ಅಬ್ಬರದ ನಡುವೆ ಅಂತಹ ಯಾವ ನೆರವಿಲ್ಲದೆಯೇ ಲೋಕನಾಯಕನಾಗಿ ಗುರುತಿಸಿಕೊಂಡವರು ವೀರಪ್ಪ ಮೊಯಿಲಿ. ಬಡತನದ ಅನುಭವದೊಂದಿಗೆ ಶೋಷಿತ ಮಹಿಳೆಯ ಮನಸ್ಸಿನ ಚಿತ್ರಣವನ್ನು ಸಮರ್ಥವಾಗಿ ತಮ್ಮ ’ಸಿರಿಮುಡಿ ಪರಿಕ್ರಮಣ’ ಮಹಾಕಾವ್ಯದ ಮೂಲಕ ನಡೆಸಿರುವ ಮೊಯಿಲಿಯವರು ಸಮಾಜಮುಖಿ ದೂರದರ್ಶಿತ್ವದ  ಸಮಷ್ಠಿ ಚಿಂತಕ ಎಂದರು.

ಶಿಕ್ಷಣ ತಜ್ಞ, ಚಿಂತಕ ಪ್ರೊ. ಕೆ.ಇ. ರಾಧಾಕೃಷ್ಣ  ಅಧ್ಯಕ್ಷತೆ ವಹಿಸಿ ಮಾತನಾಡಿ ಮೊಯಿಲಿಯವರ ಮಹಾಕಾವ್ಯದಲ್ಲಿ ಮಾತು ಮಾಣಿಕ್ಯವಾಗಿದೆ. ರಾಜಕಾರಣದ ನಡುವೆಯೂ ಮೊಯಿಲಿಯವರು ತಮ್ಮ ಒಡಲ ಕಡಲ ಗೊಂದಲಗಳನ್ನು ಮೌಲ್ಯ ಸ್ಥಿರೀಕರಣದ ದರ್ಶನದೊಂದಿಗೆ ಬಿಂಬಿಸಿದ್ದಾರೆ. ಕೃಷ್ಣನ ದೇವತ್ವವನ್ನು ಬಲವಾಗಿ ಸಮರ್ಥಿಸಿಕೊಳ್ಳುವ ಮೂಲಕ ಕವಿ ತಮ್ಮ ಆಧ್ಯಾತ್ಮಿಕ ಬಂಡಾಯ ಮನೋಭಾವವನ್ನು ತೋರಿಸಿಕೊಂಡಿದ್ದಾರೆ ಎಂದರು.

ಮಹಾಕಾವ್ಯದ ಜೊತೆ ಅನುಸಂಧಾನ ಕಾರ್ಯಕ್ರಮದಲ್ಲಿ ಭಗವದ್ಗೀತೆಯ ಚೌಕಟ್ಟಿನಲ್ಲಿ ಅಧ್ಯಾತ್ಮ ದರ್ಶನ ಕುರಿತು ಹಿರಿಯ ವಿಮರ್ಶಕ, ನಿವೃತ್ತ ಪ್ರಾಧ್ಯಾಪಕ ಡಾ. ಎಸ್.ಪಿ.ಪದ್ಮಪ್ರಸಾದ್ ಮಾತನಾಡಿ ಮೊಯಿಲಿಯವರು ತಮ್ಮ ಮಹಾಕಾವ್ಯದಲ್ಲಿ ಸಾಂಖ್ಯ, ಭಕ್ತಿ ಮತ್ತು ಕರ್ಮಯೋಗಕ್ಕೆ ಒತ್ತು ನೀಡಿದ್ದಾರೆ. ಸರಳ ತತ್ವ ನಿರೂಪಣೆ, ದೇಸೀ ಶಬ್ದಗಳ ಬಳಕೆಯ ಮೂಲಕ ಎಚ್ಚರದಿಂದ ಗೀತಾರ್ಥವನ್ನು ಮಥಿಸಿದ್ದಾರೆ. ರಾಜಕಾರಣದ ನಡುವೆ ಸಾಹಿತ್ಯ ಸಾಧಕರ ಸಾಲಿನಲ್ಲಿ ಮೊಯಿಲಿಯವರ ಕೃತಿ ಮಹತ್ವದ ಕೊಡುಗೆಯಾಗಿದೆ. ಅವರ ಕಾವ್ಯ ಧ್ಯಾನಕ್ಕೆ ಆಂತರಿಕ ತುಡಿತವೂ ಮಹತ್ವದ ಪಾತ್ರ ವಹಿಸಿದೆ ಎಂದರು.

ಮೊಯಿಲಿ ಮಹಾಕಾವ್ಯದಲ್ಲಿ  ಸಾಮಾಜಿಕ ಮೌಲ್ಯಗಳ ಪ್ರಸ್ತುತತೆ ಕುರಿತು  ಮಂಗಳೂರು ವಿಶ್ವವಿದ್ಯಾನಿಲಯದ ಸಹ ಪ್ರಾಧ್ಯಾಪಕ ಡಾ. ಧನಂಜಯ ಕುಂಬ್ಳೆ ಅವರು ಮಾತನಾಡಿ ಮೊಯಿಲಿಯವರು ತಮ್ಮ ಮಹಾಕಾವ್ಯದಲ್ಲಿ ಮಾತೃ ಪ್ರಜ್ಞೆಯನ್ನು ಗಟ್ಟಿಗೊಳಿಸುವ ಚಿಂತನೆ, ರಾಜಕೀಯದಲ್ಲಿ ಕಂಡ ಕನಸುಗಳನ್ನು ಸಾಹಿತ್ಯದ ಮೂಲಕ ಬಿಂಬಿಸಿದ್ದಾರೆ. ಮಹಾಭಾರತವನ್ನು ಕಥಾನಾಯಕಿಯಾಗಿ ದ್ರೌಪದಿಯ ಮೂಲಕ ಚಿತ್ರಿಸಿ ಶೋಷಿತರ, ಮಾತೃ ಪ್ರಜ್ಞೆ ಗಟ್ಟಿಗೊಳ್ಳಬೇಕಾದ ಹಾದಿಯನ್ನು ಚಿತ್ರಿಸಿದ್ದಾರೆ ಎಂದರು.

ಕೃಷ್ಣ ಕೃಷ್ಣೆಯರ ಸಂಬಂಧ – ವೈಶಿಷ್ಟ ಕುರಿತು ಉಪನ್ಯಾಸಕಿ ಉಪನ್ಯಾಸಕಿ ಡಾ. ಕಾತ್ಯಾಯಿನಿ ಕುಂಜಿಬೆಟ್ಟು ಮಾತನಾಡಿ ಮೊಯಿಲಿಯವರು ತಮ್ಮ ಕಾವ್ಯದ ಮೂಲಕ ಕೃಷ್ಣ ಕೃಷ್ಣೆಯರು  ಪರಮಾತ್ಮನ ಸ್ತ್ರೀ ಪುರುಷ ಪ್ರತಿರೂಪ. ಅವರೆಡೂ ಒಂದೇ ಎನ್ನುವ ಐಕ್ಯ ಸಂದೇಶವನ್ನು ನೀಡಿದ್ದಾರೆ. ಕೃಷ್ಣನ ಮೂಲಕ ಆತ್ಮನೂ ಪರಮಾತ್ಮನಾಗಬಲ್ಲ ಹಾಗೂ ದ್ರೌಪದಿಯ ಮೂಲಕ ಧರ್ಮದ ಚೌಕಟ್ಟಿನಲ್ಲಿ ಭಾರತೀಯ ನಾರಿ ಆಯ್ಕೆಯ ಸ್ವಾತಂತ್ರ್ಯವನ್ನೂ ಕಳೆದುಕೊಂಡು ಸಂಕಟ ಪಡುವ ಚಿತ್ರಣ ಇಲ್ಲಿದೆ.

ಡಾ.ಗಣನಾಥ ಎಕ್ಕಾರು ಕಾರ್ಯಕ್ರಮ ನಿರ್ವಹಿಸಿದರು.  ಪೀಠದ ಪ್ರಧಾನ ನಿರ್ದೇಶಕ ಡಾ. ನಾ.ಮೊಗಸಾಲೆ ಪ್ರಾಸ್ತಾವಿಕ ಮಾತುಗಳನ್ನಾಡಿ ಭಗವದ್ಗೀತೆಯ ಕುರಿತು ಎದ್ದಿರುವ ಎಲ್ಲ ಗೊಂದಲಗಳಿಗೆ ಆಧುನೀಕರಣಗೊಂಡ ಮೊಯಿಲಿಯವರ ಮಹಾಕಾವ್ಯವು ಉತ್ತರ ರೂಪದಲ್ಲಿದೆ ಎಂದರು. ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಅಲ್ಲಮ ಪ್ರಭು ಪೀಠದ ಕಾರ್ಯಾಧ್ಯಕ್ಷ ಯಶೋಧರ್ ಪಿ.ಕರ್ಕೇರಾ ಸ್ವಾಗತಿಸಿ ಕನ್ನಡ ಸಂಘದ ಕಾರ್ಯದರ್ಶಿ ಸದಾನಂದ ನಾರಾವಿ ವಂದಿಸಿದರು. ಆರಂಭದಲ್ಲಿ ಸತೀಶ್ ಕುಮಾರ್ ನಿಟ್ಟೆ ಅವರು ಗಮಕ ವಾಚನಗೈದರು.

 

 

The post ಕಾಂತಾವರದಲ್ಲಿ ಮೊಯಿಲಿ ಅಭಿನಂದನೆ ಕಾರ್ಯಕ್ರಮ: ಮಹಾಕಾವ್ಯದ ಅನುಸಂಧಾನ appeared first on V4News.This post first appeared on V4news, please read the originial post: here

Share the post

ಕಾಂತಾವರದಲ್ಲಿ ಮೊಯಿಲಿ ಅಭಿನಂದನೆ ಕಾರ್ಯಕ್ರಮ: ಮಹಾಕಾವ್ಯದ ಅನುಸಂಧಾನ

×

Subscribe to V4news

Get updates delivered right to your inbox!

Thank you for your subscription

×