Get Even More Visitors To Your Blog, Upgrade To A Business Listing >>

ನಿಟಿಲಾಕ್ಷ ಸದಾಶಿವ ದೇವಸ್ಥಾನ:ನಾಗದೇವರಿಗೆ ಅಷ್ಟಪವಿತ್ರ ನಾಗಮಂಡಲೋತ್ಸವ: ಏ.8ರಂದು ಧಾರ್ಮಿಕ ಕಾರ್ಯಕ್ರಮ

ಬಂಟ್ವಾಳ:  ಮೊಗರ್ನಾಡು ಸಾವಿರ ಸೀಮೆಯ ನೆಟ್ಲದ ಶ್ರೀ ನಿಟಿಲಾಕ್ಷ ಸದಾಶಿವ ದೇವಸ್ಥಾನದಲ್ಲಿ  ನಾಗದೇವರಿಗೆ ಅಷ್ಟಪವಿತ್ರ ನಾಗಮಂಡಲ ಸೇವೆಯು ಎ.೮ ರಂದು ವೈಭವಯುತವಾಗಿ ನಡೆಯಲಿದೆ ಎಂದು ನಾಗಮಂಡಲೋತ್ಸವ ಸಮಿತಿ ಗೌರವಾಧ್ಯಕ್ಷ, ನೆಟ್ಲ ದೇವಸ್ಥಾನದ ಜೀರ್ಣೋದ್ದಾರ ಸಮಿತಿ ಗೌರವಾಧ್ಯಕ್ಷ, ಸಚಿವ ಬಿ.ರಮಾನಾಥ ರೈ ತಿಳಿಸಿದರು.

ನೆಟ್ಲ ದೇವಸ್ಥಾನದ ಆವರಣದಲ್ಲಿ ಭಾನುವಾರ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಗಮಂಡಲ ದಿಂದ ನಾಡಮಂಗಲ ವಾಗಬೇಕು ಎಂಬ ಆಶಯದೊಂದಿಗೆ ಮೊಗರ್ನಾಡು ಸೀಮೆಯ 14 ಗ್ರಾಮಗಳ ಭಕ್ತರ ಸಹಕಾರದೊಂದಿಗೆ  ನಾಗಮಂಡಲವನ್ನು ಆಯೋಜಿಸಲಾಗಿದೆ ಎಂದರು.  ಎ.4 ರಿಂದಲೇ ವಿವಿಧ ಧಾರ್ಮಿಕ ವಿಧಿವಿಧಾನಗಳೊಂದಿಗೆ ನಾಗಮಂಡಲದ ವೈಭವಕ್ಕೆ ಚಾಲನೆ ದೊರೆಯಲಿದೆ.  ಎ.6 ರಂದು  ಬೆಳಿಗ್ಗೆ  11.30 ಕ್ಕೆ ಉಗ್ರಾಣ ಮುಹೂರ್ತ ನಡೆದು ಸಂಜೆ 4ಕ್ಕೆ  ಕಲ್ಲಡ್ಕದಿಂದ   ಹಸಿರು ಹೊರೆಕಾಣಿಕೆ ಮೆರವಣಿಗೆ  ನಡೆಯಲಿದ್ದು, ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಸ್ವಾಮೀಜಿ ಉದ್ಘಾಟನೆ ನೆರವೇರಿಸುವರು, ಹಿರಿಯ ಸಾಹಿತಿ ಏರ್ಯ ಲಕ್ಷ್ಮೀನಾರಾಯಣ ಭಾಗವಹಿಸುವರು. ರಾತ್ರಿ 7.30 ಕ್ಕೆ “ಕನಸು ಕಣ್ಣು ತೆರೆದಾಗ” ಮಕ್ಕಳ ಚಲನಚಿತ್ರ ಪ್ರದರ್ಶನಗೊಳ್ಳಲಿದೆ ಎಂದರು.

ಎ.೮ ರಂದು ನಡೆಯುವ ನಾಗಮಂಡಲ ಸೇವೆಯ ಅಂಗವಾಗಿ ಬೆಳಿಗ್ಗೆ 12 .30ಕ್ಕೆ ನಾಗದರ್ಶನ, ಪಲ್ಲಪೂಜೆ ನಡೆದು ಅಪರಾಹ್ನ 1 ಗಂಟೆಗೆ  ಮಹಾ ಅನ್ನಸಂತರ್ಪಣೆ ನಡೆಯಲಿದೆ.  ಧಾರ್ಮಿಕ ಸಭಾ ಕಾರ್ಯಕ್ರಮ ಸಂಜೆ 6 ಗಂಟೆಗೆ ಉಡುಪಿ ಶೀರೂರು ಮಠದ ಶ್ರೀ ಲಕ್ಷ್ಮೀ ವರ ತೀರ್ಥ ಸ್ವಾಮೀಜಿ, ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ, ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ, ಶ್ರೀಧಾಮ ಮಾಣಿಲದ ಶ್ರೀ ಮೋಹನದಾಸ ಸ್ವಾಮೀಜಿ ಗಳ ಉಪಸ್ಥಿತಿಯಲ್ಲಿ ನಡೆಯಲಿದ್ದು, ರಾತ್ರಿ 7  ಗಂಟೆಗೆ ಹಾಲಿಟ್ಟು ಸೇವೆ ಹಾಗೂ ರಾತ್ರಿ 9 ರಿಂದ ಅಷ್ಟಪವಿತ್ರ ನಾಗಮಂಡಲ ಸೇವೆ  ನಡೆದು ಬಳಿಕ ಪ್ರಸಾದ ವಿತರಣೆ ನಡೆಯಲಿದೆ ಎಂದವರು ವಿವರಿಸಿದರು.

ನಾಗಮಂಡಲೋತ್ಸವ ಸಮಿತಿ ಅಧ್ಯಕ್ಷ ರುಕ್ಮಯ ಪೂಜಾರಿ ಮಾತನಾಡಿ, ನಾಗಮಂಡಲ ಸೇವೆಗೆ 60  ಸಾವಿರದಿಂದ ಸುಮಾರು 1  ಲಕ್ಷದ ವರೆಗೆ ಭಕ್ತರು ಆಗಮಿಸುವ ನಿರೀಕ್ಷೆ ಇರಿಸಲಾಗಿದ್ದು, ಪೂರಕ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದರು. ಉಡುಪಿಯ ನಾಗಪಾತ್ರಿ ವೇದ ಮೂರ್ತಿ ಕುಕ್ಕುಂಜೆ ನಾಗಾನಂದ ವಾಸುದೇವ ಆಚಾರ್ಯರ ಮತ್ತು ಮುದ್ದೂರು ಕೃಷ್ಣ ಪ್ರಸಾದ ವೈದ್ಯ ಬಳಗದವರು ನಾಗಮಂಡಲ ಸೇವೆ ನಡೆಸಿಕೊಡುವರು ಎಂದವರು ತಿಳಿಸಿದರು.

ನೆಟ್ಲ ದೇವಸ್ಥಾನದ ಜೀರ್ಣೋದ್ದಾರ ಸಮಿತಿ ಕಾರ್ಯಾಧ್ಯಕ್ಷ ಅಶೋಕ್ ಕುಮಾರ್ ಬರಿಮಾರು ಮಾತನಾಡಿ, ನಾಗಮಂಡಲ ಸೇವೆ ಅಂಗವಾಗಿ ಸುಮಾರು 1 ಲಕ್ಷ ಮಂದಿಗೆ ಅನ್ನಸಂತರ್ಪಣೆಯ ವ್ಯವಸ್ಥೆ ಮಾಡಲಾಗಿದ್ದು,  8 ಕೌಂಟರ್ ಗಳಲ್ಲಿ ಅನ್ನಪ್ರಸಾದ ವಿತರಣೆ ನಡೆಯಲಿದೆ, 10 ಎಕ್ರೆ ಯಷ್ಟು ವಿಶಾಲಪ್ರದೇಶದಲ್ಲಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದ್ದು, ಎಲ್ಲಾ ಸಾರ್ವಜನಿಕರು, ಭಕ್ತಾಭಿಮಾನಿಗಳು ಸಹಕಾರ ನೀಡುವಂತೆ ಮನವಿ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ವಿವಿಧ ಸಮಿತಿಗಳ ಪ್ರಮುಖರಾದ ಚಂದ್ರಪ್ರಕಾಶ ಶೆಟ್ಟಿ ತುಂಬೆ, ಗಣೇಶ್ ಶೆಟ್ಟಿ ಗೋಳ್ತಮಜಲು, ಪದ್ಮನಾಭ ರೈ, ಜಗನ್ನಾಥ ಚೌಟ, ಅನಂತ ಕಾಮತ್, ಆನಂದ ಸಾಲ್ಯಾನ್, ದೇವಸ್ಥಾನದ ಆಡಳಿತಾಧಿಕಾರಿ ಉಮೇಶ್ ಭಟ್ ಮೊದಲಾದವರು ಉಪಸ್ಥಿತರಿದ್ದರು.

ವರದಿ: ಸಂದೀಪ್ ಬಂಟ್ವಾಳ

The post ನಿಟಿಲಾಕ್ಷ ಸದಾಶಿವ ದೇವಸ್ಥಾನ:ನಾಗದೇವರಿಗೆ ಅಷ್ಟಪವಿತ್ರ ನಾಗಮಂಡಲೋತ್ಸವ: ಏ.8ರಂದು ಧಾರ್ಮಿಕ ಕಾರ್ಯಕ್ರಮ appeared first on V4News.This post first appeared on V4news, please read the originial post: here

Share the post

ನಿಟಿಲಾಕ್ಷ ಸದಾಶಿವ ದೇವಸ್ಥಾನ:ನಾಗದೇವರಿಗೆ ಅಷ್ಟಪವಿತ್ರ ನಾಗಮಂಡಲೋತ್ಸವ: ಏ.8ರಂದು ಧಾರ್ಮಿಕ ಕಾರ್ಯಕ್ರಮ

×

Subscribe to V4news

Get updates delivered right to your inbox!

Thank you for your subscription

×