Get Even More Visitors To Your Blog, Upgrade To A Business Listing >>

ಲೋಕಸಭೆಯಲ್ಲಿ ಕನ್ನಡದಲ್ಲಿ ಬೇಸಾಯ, ಕನ್ನಡದಲ್ಲೇ ಚರ್ಚೆಯಾದ ಆಕ್ಷೇಪ

images

ಲೋಕಸಭೆಯಲ್ಲಿ ಕೃಷಿ ಇಲಾಖೆಯ ಬೇಡಿಕೆಗಳ ಮೇಲೆ ನಡೆದ ಚರ್ಚೆಯಲ್ಲಿ ಬೆಳಗಾವಿ ಸಂಸದ ಸುರೇಶ ಅಂಗಡಿ ಕನ್ನಡದಲ್ಲೇ ಮಾತನಾಡಿದರು. ಈ ಸಂದರ್ಭ ವಿರೋಧ ಪಕ್ಷದ ಸದಸ್ಯರೂ ಕನ್ನಡದಲ್ಲೇ ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಲೋಕಸಭೆಯು ೧೦ರಿಂದ ೧೫ ನಿಮಿಷಗಳ ಕಾಲ ಕನ್ನಡದ ವಾತಾವರಣಕ್ಕೆ ಸಾಕ್ಷಿಯಾಯಿತು.
ತಾವು ತಯಾರಿಸುವ ಉತ್ಪನ್ನದ ಬೆಲೆಯನ್ನು ಖಾಸಗಿ ಕಂಪೆನಿಗಳು ತಾವೇ ನಿಗದಿ ಮಾಡುವ ಅಧಿಕಾರ ಹೊಂದಿವೆ. ಆದರೆ, ರೈತರು ಬೆಳೆಯುವ ಬೆಳೆಗೆ ಬೇರೆಯವರು ದರ ನಿಗದಿ ಮಾಡುತ್ತಿರುವುದರಿಂದ ತೀವ್ರ ನಷ್ಟ ಉಂಟಾಗುತ್ತಿದ್ದು, ಯುವಜನತೆ ಕೃಷಿ ಕ್ಷೇತ್ರದಿಂದ ವಿಮುಖರಾಗುತ್ತಿದ್ದಾರೆ ಎಂದು ಅಂಗಡಿ ಆತಂಕ ವ್ಯಕ್ತಪಡಿಸಿದರು. ‘ಪ್ರಧಾನಿ ಮೋದಿ ಗ್ರಾಮಗಳ ಅಭಿವೃದ್ಧಿ ಮತ್ತು ಕೃಷಿ ಕ್ಷೇತ್ರದ ಅಭ್ಯುದಯಕ್ಕಾಗಿ ಅನೇಕ ಯೋಜನೆಗಳನ್ನು ರೂಪಿಸಿದ್ದಾರೆ. ರಾಜ್ಯಗಳು ಅವುಗಳ ಸಮರ್ಪಕ ಜಾರಿಗೆ ಆದ್ಯತೆ ನೀಡುವ ಅಗತ್ಯವಿದೆ’ ಎಂದು ಅವರು ಹೇಳುತ್ತಿದ್ದಂತೆಯೇ, ‘ರೈತರ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಿ. ಸರ್ಕಾರದ ಯೋಜನೆಗಳ ಬಗ್ಗೆ ವಿವರ ಬೇಡ’ ಎಂದು ಚಿಕ್ಕೋಡಿ ಸಂಸದ ಪ್ರಕಾಶ ಹುಕ್ಕೇರಿ ಕನ್ನಡದಲ್ಲೇ ಪ್ರತಿಕ್ರಿಯೆ ನೀಡಿದರು. ಬಿಜೆಪಿ ಸದಸ್ಯರಾದ ಶಿವಕುಮಾರ ಉದಾಸಿ, ಪಿ. ಸಿ. ಗದ್ದಿಗೌಡರ್, ಜಿ. ಎಂ. ಸಿದ್ದೇಶ್ವರ ಅವರು ಮಧ್ಯಪ್ರವೇಶಿಸಿ ಅಂಗಡಿ ಅವರ ಬೆಂಬಲಕ್ಕೆ ನಿಂತರು.
‘ಸಿದ್ದರಾಮಯ್ಯ ಅವರು ಬಜೆಟ್ನಲ್ಲಿ ರೈತರಿಗೆ ಅನುಕೂಲವಾಗುವಂತಹ ಯಾವುದೇ ಯೋಜನೆಗಳನ್ನು ಘೋಷಿಸಿಲ್ಲ’ ಎಂದು ಅಂಗಡಿ ಅವರು ದೂರಿದರು. ಆಗ ಕಾಂಗ್ರೆಸ್ ಸದಸ್ಯರಾದ ಎಸ್. ಪಿ. ಮುದ್ದಹನುಮೇಗೌಡ, ಡಿ. ಕೆ. ಸುರೇಶ ಮತ್ತು ಪ್ರಕಾಶ ಹುಕ್ಕೇರಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ‘ಮೊದಲು ಕೇಂದ್ರ ಸರ್ಕಾರ ರೈತರ ಸಾಲವನ್ನು ಮನ್ನಾ ಮಾಡಲಿ’ ಎಂದು ಅವರು ಅಂಗಡಿ ಅವರ ಆರೋಪಕ್ಕೆ ಉತ್ತರ ನೀಡಿದರು.
ಈ ಸಂದರ್ಭ ಸ್ಪೀಕರ್ ಸ್ಥಾನದಲ್ಲಿದ್ದ ತಂಬಿದೊರೆ ಹಾಗೂ ಇತರ ರಾಜ್ಯಗಳ ಸದಸ್ಯರು ಮೂಕ ಪ್ರೇಕ್ಷಕರಂತೆ ಕುಳಿತಿದ್ದರಲ್ಲದೆ, ಇಲ್ಲಿ ಏನು ನಡೆಯುತ್ತಿದೆ ಎಂಬಂತೆ ಪರಸ್ಪರ ಮುಖ ನೋಡಿಕೊಂಡರು. ಕೆಲ ಕಾಲ ಇದೇನು ಲೋಕಸಭೆಯೋ ಅಥವಾ ಕರ್ನಾಟಕದ ವಿಧಾನಸಭೆಯೋ ಎಂಬಂತೆ ಭಾಸವಾಯಿತು.



This post first appeared on V4news, please read the originial post: here

Share the post

ಲೋಕಸಭೆಯಲ್ಲಿ ಕನ್ನಡದಲ್ಲಿ ಬೇಸಾಯ, ಕನ್ನಡದಲ್ಲೇ ಚರ್ಚೆಯಾದ ಆಕ್ಷೇಪ

×

Subscribe to V4news

Get updates delivered right to your inbox!

Thank you for your subscription

×