ಮುಖ್ಯಮಂತ್ರಿ ಮತ್ತು ಹಣಕಾಸು ಸಚಿವರಾದ ಸಿದ್ದರಾಮಯ್ಯನವರು ಮಂಡಿಸಿದ ಬಜೆಟ್ನಲ್ಲಿ ಕರಾವಳಿಗೆ ಭರ್ಜರಿ ಕೊಡುಗೆಯನ್ನೇ ನೀಡಿದ್ದಾರೆ. ಅದರಲ್ಲಿ ದ. ಕ. ಜಿಲ್ಲೆಗೂ ಒಂದಷ್ಟು ದಕ್ಕಿದೆ.
ದ. ಕ. ಜಿಲ್ಲೆಗೆ ಬಜೆಟ್ನಲ್ಲಿ ದಕ್ಕಿದ ಅನುಕೂಲಗಳ ಮಾಹಿತಿ ಮುಂದಿನಂತಿದೆ. ೫೦ ಕೋಟಿ ರೂ. ವೆಚ್ಚದಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಂಪರ್ಕಿಸುವ ರಾಜ್ಯ ಹೆದ್ದಾರಿ-೬೭; ಮಂಗಳೂರು-ಅತ್ರಾಡಿ ರಸ್ತೆಯಲ್ಲಿ ಅಭಿವೃದ್ಧಿ. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ವಿಸ್ತರಣೆಗೆ ೨೮೬ ಎಕರೆ ಭೂಸ್ವಾಧೀನಕ್ಕಾಗಿ ಭಾರತ ವಿಮಾನ ನಿಲ್ದಾಣ ಪ್ರಾಧಿಕಾರಕ್ಕೆ ಪ್ರಸ್ತಾವನೆ, ರಾಜ್ಯ ಸರಕಾರದಿಂದ ಅಗತ್ಯ ಸೌಲಭ್ಯ.
ಮೊಗವೀರರು, ಬೆಸ್ತರ ಸಮಗ್ರ ಅಭಿವೃದ್ಧಿಗಾಗಿ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದ ಸ್ಥಾಪನೆ. ೧೦ ಕೋಟಿ ರೂ. ವೆಚ್ಚದಲ್ಲಿ ಜಿಲ್ಲಾ ವೆನ್ಲಾಕ್ ಆಸ್ಪತ್ರೆ ಮೇಲ್ದರ್ಜೆಗೆ. ೩ ಕೋಟಿ ರೂ. ವೆಚ್ಚದಲ್ಲಿ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಬೆಂಗಳೂರಿನ ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆಯ ಮಾದರಿಯಲ್ಲಿ ಪ್ರಾದೇಶಿಕ ಹಾಗೂ ಉನ್ನತ ಮಕ್ಕಳ ಆರೋಗ್ಯ ಸಂಸ್ಥೆಯ ಸ್ಥಾಪನೆ. ಮಂಗಳೂರು ಮೀನುಗಾರಿಕಾ ಬಂದರಿನಲ್ಲಿ ದೋಣಿಗಳ ಸುರಕ್ಷಿತ ನಿಲುಗಡೆಗಾಗಿ ೫ ಕೋಟಿ ರೂ. ವೆಚ್ಚದಲ್ಲಿ ಜೆಟ್ಟಿ
ಇನ್ನೂ ೭೫ ಮೀಟರ್ ವಿಸ್ತರಣೆ.
ಕರಾವಳಿಯ ಮೀನುಗಾರರಿಗೆ ಮತ್ಸ್ಯಾಶ್ರಯ ಯೋಜನೆಯಡಿ ೩,೦೦೦ ಮನೆಗಳ ನಿರ್ಮಾಣ. ಕರಾವಳಿಯ ೨೦೦ ಮಂಜುಗಡ್ಡೆ ಸ್ಥಾವರಗಳಿಗೆ, ೩೫ ಶೈತ್ಯಾಗಾರಗಳಿಗೆ ವಿದ್ಯುಚ್ಛಕ್ತಿ ಮೇಲೆ ನೀಡುವ ಸಹಾಯಧನ ಪ್ರತೀ ಯುನಿಟ್ ವಿದ್ಯುತ್ಗೆ ರೂ. ೧.೭೫ಕ್ಕೆ ಹೆಚ್ಚಳ.
ಕರಾವಳಿಯ ನದಿಗಳನ್ನು ಜೋಡಿಸುವ ಪಶ್ಚಿಮವಾಹಿನಿ ಯೋಜನೆಗೆ ೧೦೦ ಕೋಟಿ ರೂ.
ಈ ವರ್ಷದಿಂದ ಮಂಗಳೂರು ತಾಲೂಕಿನ ಸಸಿಹಿತ್ಲು ಕಡಲ ತೀರದಲ್ಲಿ ರಾಷ್ಟ್ರೀಯ ವಾರ್ಷಿಕ ಸರ್ಫಿಂಗ್ ಉತ್ಸವ ಆಯೋಜನೆ. ಮೂಡಬಿದ್ರೆ ಹಾಗೂ ಕಡಬ ಪ್ರತ್ಯೇಕ ತಾಲೂಕು ರಚನೆ. ಬಂಟ್ವಾಳದಲ್ಲಿ ನೂತನ ಆರ್.ಟಿ.ಓ. ಕಚೇರಿ ಸ್ಥಾಪನೆ. ಮಂಗಳೂರಿನಲ್ಲಿ ಹಜ್ ಭವನ ನಿರ್ಮಾಣಕ್ಕೆ ೧೦ ಕೋಟಿ ರೂ. ಅನುದಾನ. ಕರಾವಳಿ ಅಭಿವೃದ್ಧಿ ಪ್ರಾಧಿಕಾರಕ್ಕೆ ೨೦ ಕೋಟಿ ರೂ. ಅನುದಾನ
ಮಂಗಳೂರಿನಲ್ಲಿ ಸಮುದ್ರ ನೀರು ಸಂಸ್ಕರಣಾ ಘಟಕ ಸ್ಥಾಪನೆ. ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಬ್ಯಾರಿ ಅಧ್ಯಯನ ಪೀಠ ಸ್ಥಾಪನೆ. ಪಿಲಿಕುಲ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ೩೫.೬೯ ಕೋಟಿ ರೂ. ವೆಚ್ಚದಲ್ಲಿ ಅತ್ಯಾಧುನಿಕ ತಾರಾಲಯ ಡಿಸೆಂಬರ್ ೨೦೧೭ರಲ್ಲಿ ಪ್ರಾರಂಭ. ಮಂಗಳೂರು ಜಿಲ್ಲಾ ನ್ಯಾಯಾಲಯದ ಚಾವಣಿಯಲ್ಲಿ ಗ್ರಿಡ್ ಸಂಪರ್ಕವಿರುವ ಸೋಲಾರ್ ಅಳವಡಿಕೆ. ಗಲ್ಫ್ ರಾಷ್ಟ್ರಗಳಲ್ಲಿ ಕೆಲಸ ಮಾಡಿ ಹಿಂದಿರುಗುವ ನಿರುದ್ಯೋಗಿಗಳಿಗೆ ಸ್ವಯಂ ಉದ್ಯೋಗ ಕೈಗೊಳ್ಳಲು ಕೇರಳ ಮಾದರಿಯ ಕಾರ್ಯಕ್ರಮ ಜಾರಿ.