Get Even More Visitors To Your Blog, Upgrade To A Business Listing >>

ಎಚ್ಚರಿಕೆ ಗಂಟೆ ಬಾರಿಸಿ, ಪ್ರತಿಭಟನೆಗೆ ಸಿದ್ಧರಾಗಿ,  ಪುತ್ತೂರಿನ ಹಕ್ಕೊತ್ತಾಯ ಪ್ರತಿಭಟನೆಯಲ್ಲಿ ಕೋಡಿಹಳ್ಳಿ ಕರೆ

farmers

farmer
ರೈತರಿಗೆ ಮತ್ತು ಕೃಷಿಗೆ ಸಂಬಂಧಿಸಿದ ೧೧೨ ಅಂಶಗಳನ್ನು ಗುರುತು ಮಾಡಿ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ್ದು, ಬಜೆಟ್‌ನಲ್ಲಿ ರೈತರಿಗೆ ನ್ಯಾಯ ಒದಗಿಸಿಕೊಡುವ ಭರವಸೆಯನ್ನು ಮುಖ್ಯಮಂತ್ರಿಗಳು ನೀಡಿದ್ದಾರೆ. ಬಜೆಟ್‌ನಲ್ಲಿ ಈ ಭರವಸೆಗಳನ್ನು ಈಡೇರಿಸದಿದ್ದಲ್ಲಿ ಇದೇ ೧೫ರ ಬಳಿಕ ರಾಜ್ಯ ಸರ್ಕಾರದ ವಿರುದ್ದ ಬೃಹತ್ ಪ್ರತಿಭಟನೆಗೆ ಸಿದ್ದರಾಗಿ, ಎಚ್ಚರಿಕೆ ಗಂಟೆ ಬಾರಿಸಿ ಎಂದು ರಾಜ್ಯ ರೈತ ಸಂಘ ಹಸಿರುಸೇನೆಯ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಅವರು ರೈತರಿಗೆ ಕರೆನೀಡಿದರು.
ರೈತರ ಸಂಪೂರ್ಣ ಸಾಲ ಮನ್ನಾ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ರಾಜ್ಯರೈತ ಸಂಘ ಹಸಿರುಸೇನೆಯ ನೇತೃತ್ವದಲ್ಲಿ ಪುತ್ತೂರಿನ ಮಿನಿ ವಿಧಾನ ಸೌಧದ ಎದುರು ನಡೆದ ಹಕ್ಕೊತ್ತಾಯ ಪ್ರತಿಭಟನೆಯನ್ನುದ್ದೇಶಿಸಿ ಅವರು ಮಾತನಾಡಿದರು. ಮಲೆನಾಡು ಸೇರಿದಂತೆ ರಾಜ್ಯದಾದ್ಯಂತ ಬರಗಾಲ ಇದೆ. ಆದರೆ ೧೬೦ ತಾಲ್ಲೂಕುಗಳನ್ನು ಮಾತ್ರ ಬರಪೀಡಿತ ಎಂದು ಘೋಷಣೆ ಮಾಡಲಾಗಿದೆ. ಉಳಿದ ತಾಲ್ಲೂಕುಗಳನ್ನು ಘೋಷಣೆ ಮಾಡದಿದ್ದರೂ ಅಲ್ಲಿ ಬರ ಮುಂದುವರಿದಿದೆ. ರೈತರು ಸಮಸ್ಯೆಯಲ್ಲಿದ್ದಾರೆ. ಪ್ರಧಾನಿಯವರನ್ನು ಭೇಟಿ ಮಾಡಿ ಬರ ವಿಚಾರದಲ್ಲಿ ಅಧಿಕಾರಿಗಳು ತಯಾರಿಸಿದ ಮಾನದಂಡ, ಅಳತೆ ಮಾಪನವಿಲ್ಲದ ಅಂದಾಜು ಲೆಕ್ಕಾಚಾರದ ವರದಿಯನ್ನು ನೀಡಿ ಬಂದಿರುವುದೇ ಮೂರ್ಖತನ ಎಂದು ಆರೋಪಿಸಿದ ಅವರು ಮುಖ್ಯಮಂತ್ರಿಯವರು ಇಡೀ ರಾಜ್ಯವನ್ನು ಬರಪೀಡಿತ ಎಂದು ಘೋಷಣೆ ಮಾಡಬೇಕು ಎಂದು ಆಗ್ರಹಿಸಿದರು.
ರೈತರನ್ನು ನಾಗರಿಕರು ಎಂದು ಯಾವ ಸರ್ಕಾರಗಳೂ ಪರಿಗಣಿಸಿಲ್ಲ. ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಒಂದೇ. ರೈತರ ಬಗ್ಗೆ, ದುಡಿಯುವ ವರ್ಗದ ಬಗ್ಗೆ ಕಾಳಜಿಯೂ ಇಲ್ಲ, ಜವಾಬ್ದಾರಿಯೂ ಇಲ್ಲ. ರೈತರ ಹಿತಾಸಕ್ತಿ ಕಾಯುವ ಕೆಲಸವನ್ನು ಯಾವ ಸರ್ಕಾರಗಳೂ ಮಾಡುತ್ತಿಲ್ಲ. ಮಾನ ಬಿಟ್ಟವರು ದೇಶ ಮತ್ತು ರಾಜ್ಯದಲ್ಲಿ ಆಡಳಿತ ನಡೆಸುತ್ತಿದ್ದು, ಕರ್ನಾಟಕದಲ್ಲಿರುವ ಯಾವ ಜನಪ್ರತಿನಿಧಿಗಳೂ ಅನ್ನ ತಿನ್ನುವ ಕೆಲಸ ಮಾಡುತ್ತಿಲ್ಲ ಎಂದು ದೂರಿದ ಅವರು ಸರ್ಕಾರದ ಅನ್ಯಾಯ ಅಕ್ರಮಗಳ ಬಗ್ಗೆ ರೈತರಾದ ನಮಗೆ ಸಿಟ್ಟು ಬರಬೇಕು. ಇಲ್ಲದಿದ್ದರೆ ರೈತರಾದ ನಮಗೆ ಉಳಿಗಾಲವಿಲ್ಲ ಎಂದು ಎಚ್ಚರಿಸಿದರು.
ರೈತ ಸಂಘ ಹಸಿರು ಸೇನೆಯ ಜಿಲ್ಲಾ ಸಲಹೆಗಾರ ಎಸ್. ಪಿ. ಚಂಗಪ್ಪ ಅವರು ಮಾತನಾಡಿ ದೇಶದೆಲ್ಲೆಡೆ ರೈತರ ಶವ ಯಾತ್ರೆ ನಡೆಯುತ್ತಿದ್ದರೆ ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿಯಿಂದ ವಿಜಯೋತ್ಸವ ಯಾತ್ರೆ ನಡೆಯುತ್ತಿದೆ. ರಾಜಕೀಯ ಕೆಸರೆರೆಚಾಟದಲ್ಲಿ ರೈತರು ನಿರ್ನಾಮವಾಗುತ್ತಿದ್ದಾರೆ, ರೈತರಿಲ್ಲದ ಮಂಗಳೂರನ್ನು ಬರಪೀಡಿತ ಎಂದು ಘೋಷಣೆ ಮಾಡಿ ಪುತ್ತೂರನ್ನು ಕೈಬಿಡಲಾಗಿದೆ ಎಂದರು.
ರಾಜ್ಯ ರೈತ ಸಂಘ ಹಸಿರು ಸೇನೆಯ ಜಿಲ್ಲಾಧ್ಯಕ್ಷ ಶ್ರೀಧರ್ ಶೆಟ್ಟಿ ಬೈಲುಗುತ್ತು, ರಾಜ್ಯ ಸಮಿತಿಯ ಕಾರ್ಯದರ್ಶಿ ಕುಮಾರ ಸುಬ್ರಹ್ಮಣ್ಯ ಶಾಸ್ತ್ರಿ, ಮೂಡಬಿದ್ರೆ ವಲಯಾಧ್ಯಕ್ಷ ಧನಕೀರ್ತಿ ಬಲಿಪ, ಸಂಘಟನೆಯ ಮುಖಂಡ ಸಯ್ಯದ್ ಮೀರಾ ಸಾಹೇಬ್ ಕಡಬ ಅವರು ಮಾತನಾಡಿದರು. ಬಡಿಲ ಈಶ್ವರ ಭಟ್, ಧರ್ಣಪ್ಪ ಗೌಡ ಇಡ್ಯಾಡಿ, ಮುರುವ ಮಹಾಬಲ ಭಟ್, ಈಶ್ವರ ಗೌಡ ಕುಂತೂರು, ಸುದರ್ಶನ್ ನಾಕ್ ಕಂಪ, ಸುದೇಶ್ ಮಯ್ಯ, ಮನೋಹರ್ ಶೆಟ್ಟಿ ಕುಪ್ಪೆಪದವು, ರಾಘವ ಪೂಜಾರಿ ಹಿತ್ಲು, ಶೇಖರ್ ರೈ ಕುಂಬ್ರ, ಇದಿನಬ್ಬ ಪಾಣೆಮಂಗಳೂರು ಮತ್ತಿತರರು ಇದ್ದರು.This post first appeared on V4news, please read the originial post: here

Share the post

ಎಚ್ಚರಿಕೆ ಗಂಟೆ ಬಾರಿಸಿ, ಪ್ರತಿಭಟನೆಗೆ ಸಿದ್ಧರಾಗಿ,  ಪುತ್ತೂರಿನ ಹಕ್ಕೊತ್ತಾಯ ಪ್ರತಿಭಟನೆಯಲ್ಲಿ ಕೋಡಿಹಳ್ಳಿ ಕರೆ

×

Subscribe to V4news

Get updates delivered right to your inbox!

Thank you for your subscription

×