Get Even More Visitors To Your Blog, Upgrade To A Business Listing >>

ಉಳ್ಳಾಲ: ಘನತ್ಯಾಜ್ಯದ ಸಮಸ್ಯೆ ಪರಿಹಾರಕ್ಕೆ ವಿದ್ಯಾರ್ಥಿಗಳಿಂದಲೇ ಜಾಗೃತಿ : ಸಚಿವ ಯು.ಟಿ ಖಾದರ್

images

ದೇಶದಲ್ಲಿ ಭ್ರಷ್ಟಾಚಾರದ ಸಮಸ್ಯೆಯಂತೆ ಘನ ತ್ಯಾಜ್ಯದ ಸಮಸ್ಯೆಯೂ ಎದುರಾಗಿದೆ. ಸಮಾಜಕ್ಕೆ ಆಗುವ ಸಮಸ್ಯೆ ಜನಸಾಮಾನ್ಯರಿಗೆ ಆಗುವ ಸಮಸ್ಯೆಯಾಗಿದೆ. ಇಂತಹ ಸಾಮಾಜಿಕ ಪಿಡುಗನ್ನು ದೂರಮಾಡಲು ವಿದ್ಯಾರ್ಥಿಗಳಿಂದಲೇ ಜಾಗೃತಿ ಕಾರ್ಯಕ್ರಮ ಆಗಬೇಕಿದೆ ಎಂದು ಆಹಾರ ಮತ್ತು ನಾಗರೀಕ ಪೂರೈಕೆ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ.
ಅವರು ಜಿಲ್ಲಾ ಪಂಚಾಯತ್, ಜಿಲ್ಲಾ ನೆರವು ಘಟಕ, ಸ್ವಚ್ಛ ಭಾರತ್ ಮಿಷನ್, ಬಂಟ್ವಾಳ ತಾಲೂಕು ಪಂಚಾಯತ್, ಕುರ್ನಾಡು ಗ್ರಾಮ ಪಂಚಾಯಿತಿ ಹಾಗೂ ಸ್ವಯಂ ಸೇವಾ ಸಂಘ ಸಂಸ್ಥೆಗಳ ಆಶ್ರಯದಲ್ಲಿ ನಿಷೇಧಿತ ಪ್ಲಾಸ್ಟಿಕ್ ಬಳಕೆಯ ನಿಯಂತ್ರಣ ಹಾಗೂ ಸಮರ್ಪಕ ಘನ ತ್ಯಾಜ್ಯ ವಿಲೇವಾರಿ ಬೃಹತ್ ಜನಾಂದೋಲನಕ್ಕೆ ಮುಡಿಪುವಿನ ಕುರ್ನಾಡು ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಚಾಲನೆ ನೀಡಿ ಮಾತನಾಡಿದರು.
ಭವಿಷ್ಯದ ಪ್ರಜೆಗಳಿಗೆ ಉತ್ತಮವಾದ ಆರೋಗ್ಯಕ್ಕೆ ಪೂರಕವಾದ ಸಮಾಜ ನಿರ್ಮಿಸುವುದು ಹಿರಿಯರ ಜವಾಬ್ದಾರಿಯಾಗಿದೆ. ಸಂಘಸಂಸ್ಥೆಗಳ ಜತೆಗೂಡಿ ಮನೆಯ ಸುತ್ತಮುತ್ತ ಪ್ಲಾಸ್ಟಿಕ್ ಮುಕ್ತ ಸಮಾಜ ನಿರ್ಮಿಸಲು ಎಲ್ಲರೂ ಪ್ರಯತ್ನಿಸಬೇಕು. ವ್ಯಾಪಾರಸ್ಥರು ವ್ಯಾಪಾರದ ಜತೆಗೆ ಆಸ್ತಿ ಸಂಪತ್ತು ಜಾಸ್ತಿ ಮಾಡುವ ಮೂಲಕ ಭವಿಷ್ಯದ ಪ್ರಜೆಗಳಿಗೆ ಮಾರಕವಾದ ವಾತಾವರಣವನ್ನು ನಿರ್ಮಿಸಲು ಪ್ರಯತ್ನಿಸಬಾರದು. ಹಂತಗಳಲ್ಲಿ ಪ್ಲಾಸ್ಟಿಕ್ ನಿಯಂತ್ರಣಕ್ಕೆ ತರಲು ಮುಖ್ಯಮಂತ್ರಿಗಳು ಹೆಚ್ಚಿನ ಒತ್ತು ನೀಡಿದ್ದು, ಜಿಲ್ಲಾ ಪಂಚಾಯಿತಿ ಮುಖೇನ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತೆ ನಿರ್ದೇಶಿಸಿದ್ದಾರೆ. ಈ ನಿಟ್ಟಿನಲ್ಲಿ ಕುರ್ನಾಡು ಮತ್ತು ಬಾಳೆಪುಣಿ ಪ್ಲಾಸ್ಟಿಕ್ ರಹಿತ ಗ್ರಾಮ ಪಂಚಾಯತ್ ಆಗಿ ರಾಜ್ಯಕ್ಕೆ ಮಾದರಿ ಪಂಚಾಯತ್ ಆಗಿ ಹೊರಹೊಮ್ಮಲಿ ಎಂದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ‍್ಯನಿರ್ವಹಣಾ ಅಧಿಕಾರಿ ಎಂ.ಆರ್.ರವಿ ಗಾಂಧಿ ಪ್ರತಿಮೆಗೆ ಪುಷ್ಪಾರ್ಚನೆಗೈಯ್ಯುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಕುರ್ನಾಡು ಜಿಲ್ಲಾ ಪಂಚಾಯತ್ ಸದಸ್ಯೆ ಮಮತಾ.ಡಿ.ಎಸ್.ಗಟ್ಟಿ ಅಧ್ಯಕ್ಷತೆ ವಹಿಸಿದ್ದರು. ಜನಶಿಕ್ಷಣ ಟ್ರಸ್ಟಿನ ಅಧ್ಯಕ್ಷ ಹಾಗೂ ಮಾಜಿ ಒಂಬುಡ್ಸ್‌ಮೆನ್ ಶೀನ ಶೆಟ್ಟಿ, ಜಿಲ್ಲಾ ಪಂಚಾಯಿತಿ ಉಪ ಕಾರ‍್ಯದರ್ಶಿ ಎನ್.ಆರ್.ಉಮೇಶ್, ಬಂಟ್ವಾಳ ತಾಲೂಕು ಪಂಚಾಯತ್ ಅಧ್ಯಕ್ಷ ಚಂದ್ರಹಾಸ್ ಕರ್ಕೇರ, ಉಪಾಧ್ಯಕ್ಷ ಅಬ್ಬಾಸ್ ಅಲಿ, ಸದಸ್ಯ ನವೀನ್ ಪಾದಲ್ಪಾಡಿ, ಮಂಗಳೂರು ವಿಧಾನಸಭಾ ಕ್ಷೇತ್ರ ಬಿಜೆಪಿ ಅಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರ್, ಕುರ್ನಾಡು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶೈಲಜಾ ಮಿತ್ತಕೋಡಿ, ಕುರ್ನಾಡು ನಾಗರಿಕ ಸೇವಾ ಸಮಿತಿ ಅಧ್ಯಕ್ಷ ಟಿ.ರಾಜಾರಾಂ ಭಟ್, ಕೃಷಿಕ ರಮೇಶ್ ಶೇಣವ, ಮಾಜಿ ಅಧ್ಯಕ್ಷರುಗಳಾದ ದೇವದಾಸ್ ಭಂಡಾರಿ, ಮೂಸ ಕುಂಞಿ, ಕಾಂಗ್ರೆಸ್ ಮುಖಂಡರುಗಳಾದ ಜಲೀಲ್ ಮೋಂಟುಗೋಳಿ, ಉಮ್ಮರ್ ಫಜೀರ್ ಮೊದಲಾದವರು ಉಪಸ್ಥಿತರಿದ್ದರು.
ಈ ಸಂದರ್ಭ ಕುರ್ನಾಡು ಸರಕಾರಿ ಪದವಿ ಪೂರ್ವ ಕಾಲೇಜಿನಿಂದ ಮುಡಿಪು ಕೇಂದ್ರ ಬಸ್ ನಿಲ್ದಾಣದವರೆಗೆ ಸ್ವಚ್ಛತೆಯೆಡೆಗೆ ಕುರ್ನಾಡಿನ ನಡಿಗೆ ಎಂಬ ಸ್ವಚ್ಛತೆ ಅರಿವು ಜಾಥಾ ಜನಪ್ರತಿನಿಧಿಗಳು, ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರ ಸಮ್ಮುಖದಲ್ಲಿ ನಡೆಯಿತು.
ಆಂದೋಲನದಲ್ಲಿ ಜಿಲ್ಲಾ, ತಾಲೂಕು, ಗ್ರಾಮ ಮಟ್ಟದ ಅಧಿಕಾರಿಗಳು ಹಾಗೂ ಶಾಲಾ ಕಾಲೇಜಿನ ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರು ಪಾಲ್ಗೊಂಡಿದ್ದರು.
ಗ್ರಾಮದ ಸೌಂದರ್ಯ ತ್ಯಾಜ್ಯ ರಾಶಿಯಿಂದ ಹಾಳಾಗಿದೆ. ಪಂಚಾಯಿತಿನಲ್ಲೂ ಅನುದಾನವಿಲ್ಲ. ಈ ನಿಟ್ಟಿನಲ್ಲಿ ಜನರಲ್ಲಿ ಅರಿವು ಮೂಡಬೇಕಿದೆ. ಅದಕ್ಕಾಗಿ ಜಿಲ್ಲಾ ಪಂಚಾಯಿತಿ ನೇತೃತ್ವದಲ್ಲಿ ಕುರ್ನಾಡು ಭಾಗದ ಎಲ್ಲಾ ಶಾಲೆಗಳಲ್ಲಿ, ಸ್ವಸಹಾಯ ಗುಂಪುಗಳ ಮುಖೇನ ಎಲ್ಲಾ ವಾರ್ಡುಗಳಲ್ಲಿ ಅರಿವು ಕಾರ್ಯಕ್ರಮ. ಇದರಿಂದ ಮಹಿಳೆಯರಿಗೆ ಅರಿವು ಮೂಡಿಸುವುದರ ಮೂಲಕ ಮನೆಯಿಂದ ಸ್ವಚ್ಛತೆಯ ಜಾಗೃತಿ ಮೂಡಿಸಬಹುದು.This post first appeared on V4news, please read the originial post: here

Share the post

ಉಳ್ಳಾಲ: ಘನತ್ಯಾಜ್ಯದ ಸಮಸ್ಯೆ ಪರಿಹಾರಕ್ಕೆ ವಿದ್ಯಾರ್ಥಿಗಳಿಂದಲೇ ಜಾಗೃತಿ : ಸಚಿವ ಯು.ಟಿ ಖಾದರ್

×

Subscribe to V4news

Get updates delivered right to your inbox!

Thank you for your subscription

×