Get Even More Visitors To Your Blog, Upgrade To A Business Listing >>

ಭಟ್ಕಳ ಪಟ್ಟಣದಲ್ಲಿ ಪಾಳುಬಿದ್ದ ಸರಕಾರಿ ಕಟ್ಟಡಗಳು

ಭಟ್ಕಳ ತಾಲೂಕಿನಲ್ಲಿ ಸದ್ಯ ಕೆಲವೊಂದು ಹಗರಣಗಳು ಬಯಲಿಗೆ ಬರುತ್ತಿದ್ದು, ಈಗ ಪಟ್ಟಣದಲ್ಲಿ ಕೋಟ್ಯಾಂತರ ರೂಪಾಯಿ ಬೆಲೆಬಾಳುವ ಹಲವಾರು ಸರ್ಕಾರಿ ಕಟ್ಟಡಗಳನ್ನು ಸುಖಾ ಸುಮ್ಮನೆ ಕಟ್ಟಿ ಪಾಳು ಬೀಳುವಂತಾಗಿದೆ. ಸರ್ಕಾರಿ ಕಟ್ಟಡಗಳು ಯಾವುದೇ ಉಪಯೋಗಕ್ಕೆ ಬಾರದೇ ಹಾಳಾಗುತ್ತಿವೆ. ಈ ಪಾಳು ಬೀಳುತ್ತಿರುವ ಕಟ್ಟಡಗಳ ಪೈಕಿ ಭಟ್ಕಳ ಪುರಸಭೆಯ ಕಟ್ಟಡಗಳು ಮೊದಲ ಸ್ಥಾನದಲ್ಲಿದ್ದು, ಹಲವಾರು ಹೊಸ ಕಟ್ಟಡಗಳೇ ಯಾವುದೇ ಪ್ರಯೋಜನಕ್ಕೆ ಬರುತ್ತಿಲ್ಲ ಎನ್ನುವುದು ವಿಪರ್ಯಾಸ ಎನ್ನಬಹುದು. ಹಾಗಿದ್ದರೆ ಈ ಹಾಳು ಬೀಳುತ್ತಿರುವ ಕಟ್ಟಡಗಳಾದರೂ ಯಾವುದು? ಅದರ ಸ್ಥಿತಿ ಹೇಗಾಗಿದೆ ಈಗ? ಇವೆಲ್ಲವನ್ನು ತಿಳಿಯಬೇಕೆ ಹಾಗಿದ್ದರೆ ಈ ವಿಶೇಷ ವರದಿ ನೋಡಿ.

ಯಸ್, ಸರ್ಕಾರ ಜನರಿಗೆ ಅನೂಕೂಲವಾಗಲಿ ಎಂಬ ಕಾರಣಕ್ಕೆ ಆಯಾ ಜಿಲ್ಲೆ ತಾಲೂಕೂ ಗ್ರಾಮಗಳಲ್ಲಿ ಸರ್ಕಾರಿ ಕಛೇರಿಗಳ ನಿರ್ಮಾಣ ಮಾಡಲು ಕೋಟಿಗಟ್ಟಲೇ ಹಣವನ್ನು ಚೆಲ್ಲುತ್ತದೆ. ಆದರೆ ಅದನ್ನು ಸರಿಯಾಗಿ ಸದುಪಯೋಗ ಪಡಿಸಿಕೊಂಡು ಜನರಿಗೆ ಅನೂಕೂಲವಾಗುವ ಕಾರ್ಯದಲ್ಲಿ ಸರ್ಕಾರಿ ಇಲಾಖಾ ಅಧಿಕಾಗಳು ಪದೇ ಪದೇ ವಿಫಲರಾಗುತ್ತಿದ್ದಾರೆ ಎನ್ನುವುದಕ್ಕೆ

ಭಟ್ಕಳ ತಾಲೂಕಿನಾದ್ಯಂತ ತಲೆ ಎತ್ತಿ ಸದ್ಯ ಪಾಳು ಬಿದ್ದಿರುವ ಸ್ಥಿತಿಯಲ್ಲಿರುವ ಕೆಲವೊಂದು ಸರ್ಕಾರಿ ಕಟ್ಟಡಗಳ ಚಿತ್ರಣವೇ ಸಾಕ್ಷಿ ಎನ್ನಬಹುದು. ತಾಲೂಕಿನ ತರಕಾರಿ ಮಾರುಕಟ್ಟೆ, ತಹಶೀಲ್ದಾರ್ ಕಛೇರಿಯ ಪಕ್ಕದ ಶೌಚಾಲಯ, ಪುರಭವನ, ( ಈ ಕಟ್ಟಡ ಕಳೆದ ೪ ವರ್ಷಗಳಿಂದ ನಡೆಯುತ್ತಿದೆ.) ಸುಧೀಂಧ್ರ ಕಾಲೇಜು ಪಕ್ಕದ ಪುರಸಭಾ ವಸತಿ ಗೃಹ, ನವಾಯತ ಕಾಲೋನಿಯ ಹಳೆಯ ಚೆಕ್ ಪೋಸ್ಟ ಕಟ್ಟಡ ಸೇರಿ ಇನ್ನು ಹಲವಾರು ಸರ್ಕಾರಿ ಕಟ್ಟಡಗಳು ಪಾಳು ಬೀಳುತ್ತಿವೆ. ಇವೆಲ್ಲ ಕಟ್ಟಡಗಳ ನಿರ್ಮಾಣ ಒಂದಲ್ಲ ಒಂದು ಕಾರಣಕ್ಕೆ ನೇಪಥ್ಯಕ್ಕೆ ಸರಿಯುತ್ತಿದ್ದು ಜನರ ಹಣ ಪೋಲಾಗುತ್ತಿರುದಂತು ಸತ್ಯ. ತಾಲೂಕಿನ ರವಿವಾರದ ಸಂತೆ ನಡೆಯುವ ಜಾಗದಲ್ಲಿನ ಪುರಸಭೆಯಲ್ಲಿ ನಬಾರ್ಡ ಅನುದಾನದಲ್ಲಿ ವಿಶೇಷ ವಿನ್ಯಾಸದಲ್ಲಿ ರಚಿಸಲ್ಪಟ್ಟ ತರಕಾರಿ ಮಾರುಕಟ್ಟೆ ಕಟ್ಟಡವೂ ಉದ್ಘಾಟನೆಗೊಂಡು ಆರು ವರ್ಷ ಕಳೆದರು ಸಹ ಇದನ್ನು ಉಪಯೋಗಕ್ಕೆ ಯಾವುದೇ ವ್ಯಾಪಾರಿಗಳು ಮುಂದೆ ಬಂದಿಲ್ಲ. ಬದಲಿಗೆ ಸರ್ಕಾರಿ ಹಣದ ಅನುದಾನದಲ್ಲಿ ಕಟ್ಟಿದ ಕಟ್ಟಡ ಹಾಗೇ ಇದೆ. ಯಾವುದೇ ಓರ್ವ ತರಕಾರಿ ವ್ಯಾಪಾರಿಯು ಬರುತ್ತಿಲ್ಲ. ಕಾರಣ ಅಲ್ಲಿನ ವ್ಯವಸ್ಥೆ ಹೈಟೆಕ್ ಆಗಿದ್ದು, ಇದರ ಬಳಕೆ ಅವರಿಗೆ ತಿಳಿಯುತ್ತಿಲ್ಲ. ಆದ್ದರಿಂದ ಸದುಪಯೋಗಪಡಿಸಿಕೊಳ್ಳಬೇಕಾದ ಕಟ್ಟಡ ಉಪಯೋಗಕ್ಕೆ ಬಾರುತ್ತಿಲ್ಲ. ಕಟ್ಟಿದ ಕಟ್ಟಡವನ್ನು ಹಾಗೆಯೇ ಬಿಟ್ಟು ನೂತನವಾಗಿ ವ್ಯಾಪಾರಿಗಳಿಗೆ ಶೆಡ್‌ಗಳನ್ನು ನಿರ್ಮಿಸಿ ಕೊಡಲಾಯಿತು. ಇದರಲ್ಲೇ ಎಲ್ಲ ತರಕಾರಿ ವ್ಯಾಪಾರಿಗಳು ಸದ್ಯ ವ್ಯಾಪಾರ ಮಾಡುತ್ತಿದ್ದಾರೆ. ಆದರೆ ಕಟ್ಟಿಡ ಭವ್ಯ ತರಕಾರಿ ಕಟ್ಟಡ ಮಾತ್ರ ಹಾಗೇ ಉಳಿದಿದೆ. ಇನ್ನು ತಾಲೂಕಾ ತಹಶೀಲ್ದಾರ್ ಕಛೇರಿಯ ಪಕ್ಕದ ಶೌಚಾಲಯ ಕೂಡ ಇದೇ ಅನುದಾನದಲ್ಲಿ ನಿರ್ಮಿಸಲಾಗಿದ್ದು, ಅದು ಸಹ ಸಿದ್ದಗೊಂಡು ಪಾಳುಬೀಳುತ್ತಿದೆ. ಕಳೆದ ಕೆಲವು ದಿನಗಳ ಹಿಂದೆ ಸಾರ್ವಜನಿಕರಿಂದ ಕೇಳಿ ಬಂದ ಕೂಗಿನ ಮೇರೆಗೆ ಶೌಚಾಲಯವನ್ನು ಪುನರ್ ಬಣ್ಣ ಬಳಿದು ಸರಿಪಡಿಸಿದರು ಮತ್ತೆ ಯಥಾ ಸ್ಥಿತಿಯಲ್ಲಿ ಪಾಳು ಬೀಳುವತ್ತ ಸಾಗಿದೆ. ಅದೇ ರೀತಿ ಪುರಸಭೆಯ ಶೌಚಾಲಯವೂ ಸಹ ಆರಂಭದಿಂದ ಉಪಯೋಗಕ್ಕೆ ಬಾರದೇ ಹಾಳಾಗುತ್ತಿದೆ. ಸುಮಾರು ೨ ಕೋಟಿಗಿಂತ ಹೆಚ್ಚು ವೆಚ್ಚದಲ್ಲಿ ಸರ್ಕಾರಿ ಆಸ್ಪತ್ರೆಯ ಎದುರಿನಲ್ಲಿ ಪುರಭವನವನ್ನು ನಿರ್ಮಿಸಲು ಮುಂದಾಗಿರುವ ಪುರಸಭೆ ಇಲ್ಲಿ ಸರಿಯಾದ ಪಾಕಿಂಗ್ ವ್ಯವಸ್ಥೆ ಮಾಡಿಲ್ಲ. ಕಟ್ಟಡವು ಕಳೆದ ನಾಲ್ಕು ವರ್ಷಗಳಿಂದ ಕಾಮಗಾರಿ ಸಾಗುತ್ತಲಿದೆ. ಇದು ಕೂಡಾ ಮುಂದೆ ಸಮಸ್ಯೆಗಳ ಆಗರವಾಗುವ ಸಾಧ್ಯತೆ ಇದ್ದು ಬಹು ಮುಖ್ಯವಾಗಿ ಇಲ್ಲಿ ಪಾರ್ಕಿಂಗ್ ನಿರ್ಮಾಣ ಮಾಡಬೇಕಿದೆ. ಆಗಿನ ಜಿಲ್ಲಾಧಿಕಾರಿಗಳಾದ ಕೃಷ್ಣಯ್ಯ ಅವರು ಈ ಪುರಭವನಕ್ಕೆ ನೆಲ ಮಾಳಿಗೆಯಲ್ಲಿ ಪಾಕಿಂಗ್ ವ್ಯವಸ್ಥೆ ಕಲ್ಪಿಸಿ ಕಟ್ಟಡ ನಿರ್ಮಾಣ ಮಾಡಿ ಎಂಬ ಕಿವಿಮಾತನ್ನು ಹೇಳಿದ್ದರು ಸಹ ಈ ಬಗ್ಗೆ ತಲೆಕೆಡಿಸಿಕೊಳ್ಳದ ಪುರಸಭೆ ತನ್ನದೇ ಬೇಜವಾಬ್ದಾರಿ ಕೆಲಸವನ್ನು ಮುಂದುವರೆಸಿದೆ. ಸದ್ಯ ಪುರಸಭೆಯ ಏನಾದರೂ ಸರಿಯಾದ ರೀತಿಯಲ್ಲಿ ಕಟ್ಟಡ ನಿರ್ಮಾಣ ಮಾಡಿದ್ದರೆ ನಾಲ್ಕಾರು ಕೋಟಿ ಹಣ ಉಳಿತಾಯ ಮಾಡಬಹುದಿತ್ತು. ಇನ್ನೊಂದೆಡೆ ಖಜಾನೆಗಾಗಿ ಕಟ್ಟಿದ ಕಟ್ಟಡ ಸುಸಜ್ಜಿತವಾಗಿದ್ದು, ಅಧಿಕಾರಿಗಳ ನಿರ್ಲಕ್ಷದಿಂದ ಹಾಳಾಗುವ ಸ್ಥಿತಿಗೆ ಬಂದಿದೆ. ಅದೇ ರೀತಿ ತಾಲೂಕಿನಲ್ಲಿನ ಪೋಲೀಸ್ ಹಳೆ ವಸತಿಗೃಹಗಳು ಕೂಡಾ ಇದಕ್ಕೆ ಹೊರತಾಗಿಲ್ಲ. ಅಲ್ಲಿ ಮನೆಗಳೆಲ್ಲಾ ಸೋರುತ್ತಿದ್ದು, ಜನರ ಸೇವೆಗಾಗಿ ರಾತ್ರಿ ಹಗಲು ಎನ್ನದೇ ಕೆಲಸ ಮಾಡುವ ಪೋಲೀಸರ ಮನೆಗಳ ಸ್ಥಿತಿ ಶೋಚನೀಯವಾಗಿದೆ. ಇಲ್ಲಿರುವ ಬಹುತೇಕ ಎಲ್ಲಾ ಇಲಾಖೆಗಳ ಸ್ಥಿತಿ ಇದೆ ಆಗಿದೆ. ಮುಖ್ಯವಾಗಿ ತಾಲೂಕಿನ ತಹಸೀಲ್ದಾರ್ ಕಛೇರಿಯಲ್ಲಿನ ಸಬ್ ಜೈಲಿನ ಪರಿಸ್ಥಿತಿ ಇನ್ನು ಶೋಚನೀಯವಾಗಿದೆ. ಈ ಹಿಂದೆ ಅಲ್ಲಿಂದ ಖೈದಿಗಳು ಪರಾರಿಯಾದ ಘಟನೆಗಳು ಸಹ ನಡೆದಿದೆ. ಇಲ್ಲಿ ಕೋಣೆಗಳ ಕಿಟಕಿಗಳನ್ನು ತಾತ್ಕಾಲಿಕವಾಗಿ ದುರಸ್ಥಿಗೊಳಿಸಿದ್ದರು ಅದು ಸಹ ದಿನಕಳೆದಂತೆ ಅವಸಾನದತ್ತ ಸಾಗುತ್ತಿರುವುದು ಅಲ್ಲಿನ ಪರಿಸ್ಥಿತಿಗೆ ಹಿಡಿದ ಕೈಗನ್ನಡಿ ಎನ್ನಬಹುದು. ಒಟ್ಟಾರೆ ತಾಲೂಕಿನಲ್ಲಿ ಹಲವಾರು ಸರ್ಕಾರಿ ಕಛೇರಿಗಳಿಗೆ ಸ್ವಂತ ಕಟ್ಟಡಗಳಿಲ್ಲವಾಗಿದ್ದು, ತಿಂಗಳಿಗೆ ಸಾವಿರಾರು ರೂಪಾಯಿ ಬಾಡಿಗೆ ವ್ಯಯಿಸಿ ಖಾಸಗಿ ಕಟ್ಟಡದಲ್ಲಿ ಕೆಲಸ ಕಾರ್ಯವನ್ನು ನಡೆಸಬೇಕಾಗಿದೆ. ತಾಲೂಕಾಡಳಿತ ಸರ್ಕಾರಿ ಕಟ್ಟಡಗಳನ್ನು ಅವಶ್ಯವಿರುವ ಕಛೇರಿಗಳಿಗೆ ನೀಡಿದರೆ ಕಟ್ಟಡವೂ ಸುವ್ಯವಸ್ಥಿತವಾಗಿರುತ್ತಿತ್ತು. ಇದರಿಂದ ಸರ್ಕಾರದ ಬೊಕ್ಕಸಕ್ಕೆ ವಾರ್ಷಿಕವಾಗಿ ಲಕ್ಷಾಂತರ ರೂಪಾಯಿ ಉಳಿತಾಯವಾಗಲಿದೆ. ಇನ್ನಾದರೂ ತಾಲೂಕಾಢಳಿತ ಹಾಗೂ ಪುರಸಭೆ ಜಂಟಿಯಾಗಿ ಕಾರ್ಯಪ್ರವೃತ್ತರಾಗುತ್ತಾರಾ ಎನ್ನುವುದು ಕಾದುನೋಡಬೇಕಾಗಿದೆ.

ರಾಘವೇಂದ್ರ ಮಲ್ಯ ಭಟ್ಕಳThis post first appeared on V4news, please read the originial post: here

Share the post

ಭಟ್ಕಳ ಪಟ್ಟಣದಲ್ಲಿ ಪಾಳುಬಿದ್ದ ಸರಕಾರಿ ಕಟ್ಟಡಗಳು

×

Subscribe to V4news

Get updates delivered right to your inbox!

Thank you for your subscription

×